ಲಾಭ ತಂದು ಕೊಡುವ ಸ್ವಉದ್ಯೋಗಗಳು! [Self employed]

ನಿರುದ್ಯೋಗಿಗಳು ತಮ್ಮ ಪ್ರಬಲ ಗಟ್ಟಿ ಮನಸ್ಸು ಮತ್ತು ಕಠಿಣ ಶ್ರಮ ಪಟ್ಟರೆ ಸ್ವಉದ್ಯೋಗ (Self employed) ಮಾಡಿ ತಮ್ಮ ಜೀವನವನ್ನು ಬದಲಾಯಿಸಬಹುದು. 140 ಕೋಟಿ ಜನಸಂಖ್ಯೆ ದಾಟಿದ ನಮ್ಮ ದೇಶದಲ್ಲಿ ಶಿಕ್ಷಣವಿದ್ದರೂ ಉದ್ಯೋಗವಿಲ್ಲ, ಉದ್ಯೋಗ ಇದ್ದರು ಕಡಿಮೆ ಸಂಬಳ ಮತ್ತು ಮನಸ್ಸಿಲ್ಲದ ಕಡೆ ತಮಗೆ ಇಷ್ಟವಿಲ್ಲದ ಕಡೆ ಕೆಲಸ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
ಕೃಷಿ ಮಾಡಲು ಜಾಗವಿದ್ದರೆ ನೀರಿಲ್ಲ, ನೀರಿದ್ದರೆ ಜಾಗವಿಲ್ಲವೆಂಬುದು ರೈತಾಪಿ ವರ್ಗದ ಯುವಕರ ಗೋಳು ಮತ್ತು ಕರ್ನಾಟಕದಲ್ಲಿ ಹಿಂದಿ ಮತ್ತು ಅನ್ಯ ಭಾಷಿಕರ ದಬ್ಬಾಳಿಕೆಯಿಂದಾಗಿ ಕನ್ನಡಿಗರಿಗೆ ಉದ್ಯೋಗದ ಸಮಸ್ಯೆ ಎದುರಾಗಿದೆ. ರಾಜಕಾರಣಿಗಳ ಮತ್ತು ಸರಕಾರಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ದೇಶದಲ್ಲಿ ವಿದೇಶಿ ನೇರ ಬಂಡವಾಳವನ್ನು ಹೆಚ್ಚಿಸಿ ಉದ್ಯೋಗ ಸೃಷ್ಟಿಸುವಲ್ಲಿ ಸೋತಿದ್ದಾರೆ.

ಜೀವನ ಬದಲಿಸಬಲ್ಲ ಸ್ವಉದ್ಯೋಗಗಳಿವು (Self employed) 

ಹಾಳೆ, ಪೇಪರ್ ತಟ್ಟೆ ತಯಾರಿಕೆ.

ಕಸದಿಂದ ರಸ ಎಂಬಂತೆ ಅಡಿಕೆ ಮರದಿಂದ ಸಿಗುವ ಹಾಳೆಯನ್ನು ಬಳಸಿ ಪ್ಲೇಟ್ ತಯಾರಿಸಿದರೆ ಉತ್ತಮ ಆದಾಯ ಗಳಿಸಬಹುದು. ಪ್ಲಾಸ್ಟಿಕ್ ಮುಕ್ತ ಭಾರತ ಕಲ್ಪನೆಗೆ ಹೆಚ್ಚಾಗಿ ನಮ್ಮ ದೇಶದಲ್ಲಿ ಒತ್ತು ನೀಡುತ್ತಿರುವಾಗ ಈ ಉದ್ಯೋಗವನ್ನು ಶುರು ಮಾಡಬಹುದು ಮತ್ತು ನಾಲ್ಕರಿಂದ ಐದು ಜನರಿಗೆ ಉದ್ಯೋಗ ನೀಡಿದಂತೆ ಆಗುತ್ತದೆ.

ಹಾಳೆ ತಟ್ಟೆ ಮತ್ತು ಪೇಪರ್ ತಟ್ಟೆಗಳು ಒಂದು ಸಲ ಬಲ ಸಿ ಬಿಸಾಡುವುದರಿಂದ ಇದರ ಬೇಡಿಕೆ ಕಡಿಮೆಯಾಗುವುದಿಲ್ಲ ಮತ್ತು ಉತ್ತಮ ಗುಣಮಟ್ಟದ ಹಾಳೆ ತಟ್ಟೆಗಳಿಗೆ ವಿದೇಶದಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ ಈ ಉದ್ಯಮವನ್ನು ಸಣ್ಣ ಪ್ರಮಾಣದಿಂದ ಉತ್ಪಾದಿಸಿ ದೊಡ್ಡ ಪ್ರಮಾಣದ ಉತ್ಪಾದನೆ ಶುರು ಮಾಡುವ ಅವಕಾಶವಿದೆ.

ಇಂದಿನ ದಿನಗಳಲ್ಲಿ ರಸ್ತೆ ಬದಿಯ ಕ್ಯಾಂಟೀನ್, ಫುಡ್ ಟ್ರಕ್ ಮತ್ತು ಮದುವೆ ಸಮಾರಂಭ, ಸಮಾವೇಶ, ಜಾತ್ರಾ ಕಾರ್ಯಕ್ರಮಗಳಲ್ಲಿ ಹೆಚ್ಚು ಊಟದ ತಟ್ಟೆಗಳಿಗೆ ಬೇಡಿಕೆ ಇದೆ. ಅಡಿಕೆ ಮತ್ತು ಪೇಪರ್ ತಟ್ಟೆಗಳನ್ನು ಒಮ್ಮೆ ಬಳಸಿದ ನಂತರ ಗೊಬ್ಬರವಾಗಿ ಪರಿವರ್ತನೆ ಮಾಡಬಹುದು ಮತ್ತು ನಮ್ಮ ಸ್ವಚ್ಛ ಪರಿಸರಕ್ಕೆ ಸಣ್ಣ ಪ್ರಮಾಣದ ಕೊಡುಗೆಯನ್ನು ನೀಡಬಹುದಾಗಿದೆ.

ಉಪ್ಪಿನಕಾಯಿ ವ್ಯವಹಾರ 

ಭಾರತೀಯರಿಗೆ ಊಟದ ಜೊತೆ ಉಪ್ಪಿನಕಾಯಿ ಸವಿಯುವ ಹವ್ಯಾಸ ಹೆಚ್ಚಾಗಿ ಇರುವುದರಿಂದ ಉಪ್ಪಿನಕಾಯಿಯ ಬೇಡಿಕೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಇರುತ್ತದೆ. ಮಹಿಳೆಯರಿಗೆ ತಮ್ಮ ಮನೆಯಲ್ಲಿಯೇ ಸಣ್ಣ ಪ್ರಮಾಣದಲ್ಲಿ ಉಪ್ಪಿನಕಾಯಿಯನ್ನು ಮನೆ ಮಂದಿ ಎಲ್ಲ ಸೇರಿ ತಯಾರಿಸಿ ತಮ್ಮ ಹತ್ತಿರದ ಅಂಗಡಿ ಮತ್ತು ಸೂಪರ್ ಮಾರ್ಕೆಟ್ಗಳಲ್ಲಿ ಪ್ರಾರಂಭದ ದಿನಗಳಲ್ಲಿ ಮಾರಾಟ ಮಾಡಬಹುದು.

ಉಪ್ಪಿನಕಾಯಿ ತಯಾರಿಕೆಯಲ್ಲಿ ಶುಚಿ ಮತ್ತು ಗುಣಮಟ್ಟದ ಮಾವು, ಕ್ಯಾರೆಟ್, ಹಸಿಮೆಣಸಿನಕಾಯಿ, ಶುಂಠಿ, ನಿಂಬೆ ಮುಂತಾದ ಪದಾರ್ಥಗಳನ್ನು ಬಳಸಬೇಕು ಮತ್ತು ಈ ರೀತಿಯಾಗಿ ಮಾಡಿದಾಗ ತಮ್ಮ ಉಪ್ಪಿನಕಾಯಿಯನ್ನು ಉತ್ತಮ ಬ್ರಾಂಡ್ ಆಗಿ ರೂಪಿಸಬಹುದು.

ಮಹಿಳೆಯರಿಗೆ ಸರಕಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯಗಳಿರುವ ಕಾರಣ ಆರಾಮವಾಗಿ ಈ ಉದ್ಯಮವನ್ನು ಶುರು ಮಾಡಿ ತಮ್ಮ ಜೀವನವನ್ನು ಉತ್ತಮವಾಗಿಸಿಕೊಳ್ಳಬಹುದು. ಈ ಬಿಸಿನೆಸ್ ಮಾಡಲು ಹೆಚ್ಚು ಬಂಡವಾಳದ ಅಗತ್ಯವಿರುವುದಿಲ್ಲ ಹಾಗಾಗಿ ಮನೆ ಮಂದಿ ಸೇರಿ ಮನೆಯಲ್ಲಿಯೇ ಈ ಬಿಸಿನೆಸ್ ಶುರು ಮಾಡಬಹುದು.

ದೀಪದ ಬತ್ತಿ, ಕರ್ಪೂರ, ಅಗರಬತ್ತಿಗಳ ತಯಾರಿಕೆ

ಮಹಿಳೆಯರು ಮತ್ತು ಮನೆ ಮಂದಿ ಸೇರಿ ತಮ್ಮ ಬಿಡುವಿನ ವೇಳೆಯಲ್ಲಿ ಸಣ್ಣ ಪ್ರಮಾಣದಲ್ಲಿ ಈ ವೃತ್ತಿಯನ್ನು ಶುರು ಮಾಡಬಹುದು. ನಮ್ಮ ದೇಶದಲ್ಲಿ ಮುಂಜಾನೆ ಎದ್ದು ಮತ್ತು ರಾತ್ರಿ ಸಮಯದಲ್ಲಿ ದೇವರಿಗೆ ಪೂಜೆ ಮಾಡುವ ಸಂಪ್ರದಾಯ ಇರುವ ಕಾರಣ ದೀಪದ ಬತ್ತಿ, ಕರ್ಪೂರ ಮತ್ತು ಅಗರಬತ್ತಿಗಳಿಗೆ ಯಾವತ್ತು ಬೇಡಿಕೆ ಕಡಿಮೆಯಾಗುವುದಿಲ್ಲ.

ತಯಾರಾದ ವಸ್ತುಗಳನ್ನು ಹೋಲ್ಸೇಲ್ ಅಥವಾ ಚಿಲ್ಲರೆ ವ್ಯಾಪಾರಿಗಳಿಗೆ ವ್ಯಾಪಾರ ಮಾಡಬಹುದು. ದೀಪದ ಬತ್ತಿ, ಕರ್ಪೂರ ಮತ್ತು ಅಗರಬತ್ತಿಗಳನ್ನು ಜೊತೆಯಾಗಿ ಪೂಜೆಯಲ್ಲಿ ಉಪಯೋಗಿಸುವ ಕಾರಣ ಮೂರು ವಸ್ತುಗಳ ಬೇಡಿಕೆ ಒಂದೇ ರೀತಿಯಾಗಿರುತ್ತದೆ. ಈ ಉದ್ಯಮಕ್ಕೆ ಬಂಡವಾಳದ ಪ್ರಮಾಣ ಹೆಚ್ಚಾಗಿ ಬೇಕಾಗದ ಕಾರಣ ಯಾವ ಪುರುಷ ಮತ್ತು ಮಹಿಳೆಯರು ಶುರು ಮಾಡಬಹುದಾದ ಸ್ವಉದ್ಯೋಗವಿದು.

ಟೈಲರಿಂಗ್

ಇಂದಿನ ಕಾಲದಲ್ಲಿ ಶುಭ ಸಮಾರಂಭ ಬಂತೆಂದರೆ ಟೈಲರ್ ಗಳಿಗೆ ಬಿಡುವಿಲ್ಲದಿರುವಷ್ಟು ಕೆಲಸವಿರುತ್ತದೆ. ನಾವು ಬಟ್ಟೆ ಅಂಗಡಿಯಿಂದ ಎಷ್ಟೇ ಬಟ್ಟೆ ತೆಗೆದುಕೊಂಡರು ಅದರ ರಿಪೇರಿ ಮಾಡಲು ಟೈಲರ್ಗಳ ಅವಶ್ಯಕತೆ ಹೆಚ್ಚಾಗಿರುತ್ತದೆ.

ಮದುವೆ ಸಮಾರಂಭಗಳಲ್ಲಿ ಮಹಿಳೆಯರ ವಿವಿಧ ಡಿಸೈನ್ ಗಳ ರವಿಕೆ ಹೊಳಿಯಲು ಬೇಡಿಕೆ ಹೆಚ್ಚಿರುತ್ತದೆ ಮತ್ತು ಟೈಲರಿಂಗ್ ಕಲಿತವರ ಸಂಖ್ಯೆ ಕಡಿಮೆ ಇರುವ ಕಾರಣ ಈಗಿನ ಟ್ರೆಂಡಿಗೆ ಅನುಗುಣವಾಗಿ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಂಡರೆ ಟೈಲರಿಂಗ್ ನಿಂದ ಉತ್ತಮವಾದ ಜೀವನವನ್ನು ರೂಪಿಸಿಕೊಳ್ಳಬಹುದು.

ಬೇಕರಿ ಉತ್ಪನ್ನಗಳು

ಭಾರತೀಯರಿಗೆ ಸಂಜೆ ಟೀ ಕುಡಿಯುವ ಹವ್ಯಾಸ ಹೆಚ್ಚಾಗಿರುತ್ತದೆ. ಟೀ ಜೊತೆಯಲ್ಲಿ ವಿವಿಧ ರೀತಿಯ ಬೇಕರಿ ತಿಂಡಿಗಳನ್ನು ತಿನ್ನೋದು ಜನರ ಹವ್ಯಾಸವಾಗಿದೆ. ಮನೆಯಲ್ಲಿಯೇ ಚಕ್ಕುಲಿ, ನಿಪ್ಪಟ್ಟು, ಚಿಪ್ಸ್, ಲಾಡು ಮುಂತಾದ ತಿಂಡಿಗಳನ್ನು ತಯಾರಿಸಿ ಹತ್ತಿರದ ಅಂಗಡಿಗಳಲ್ಲಿ ಮತ್ತು ಬೇಕರಿಗಳಲ್ಲಿ ಮಾರಾಟ ಮಾಡಬಹುದು.

ಈ ಉದ್ಯಮಕ್ಕೆ ಹೆಚ್ಚಿನ ಬೇಡಿಕೆ ಇರುವ ಕಾರಣ ಆಸಕ್ತರು ಈ ಉದ್ಯಮವನ್ನು ಶುರು ಮಾಡಬಹುದು. ಉತ್ತಮ ಗುಣಮಟ್ಟದ ಶುಚಿ ಮತ್ತು ರುಚಿ ಬೇಕರಿ ಉತ್ಪನ್ನಗಳಿಗೆ ಬೇಡಿಕೆ ಯಾವತ್ತು ಕಡಿಮೆಯಾಗುವುದಿಲ್ಲ. ಚಿಪ್ಸ್ ಮತ್ತು ಪುಟಾಣಿ ಕಡ್ಲೆ ಯಂತ ತಿಂಡಿಗಳನ್ನು ಸಮೀಪದ ಪೆಟ್ಟಿಗೆ ಅಂಗಡಿ ಮತ್ತು ಬಾರ್ ಗಳ ಸಮೀಪ ಮಾರಾಟ ಮಾಡಿದರೆ ಉತ್ತಮ ಆದಾಯ ಗಳಿಸಬಹುದು.

ಇಂದಿನ ಸಮಾಜದಲ್ಲಿ ಅನೇಕ ಮಹಿಳೆಯರು ತಮ್ಮ ಚಿನ್ನವನ್ನು ಅಡವಿಟ್ಟು ಮತ್ತು ಫೈನಾನ್ಸ್ ಗಳಿಂದ ಬಡ್ಡಿಗೆ ಸಾಲವನ್ನು ಪಡೆದು ಬೇಕರಿ ಉತ್ಪನ್ನವನ್ನು ಶುರು ಮಾಡಿ ಈ ಉದ್ಯಮದಲ್ಲಿ ಯಶಸ್ವಿಯಾದ ಮಹಿಳೆಯರನ್ನು ನಾವು ಕಾಣಬಹುದು. ಹಲವಾರು ಮನೆಗಳಲ್ಲಿ ಈ ಉದ್ಯಮವು ಜನರ ಜೀವನವನ್ನು ಬದಲಾಯಿಸಿದೆ.

ಫುಡ್ ಟ್ರಕ್ ಉದ್ಯಮ 

ಸಂಜೆಯಾದರೆ ಬಾಯಿ ಚಪ್ಪರಿಸುವ ಹವ್ಯಾಸ ಹೊಂದಿರುವ ನಮ್ಮ ಜನರು ಉತ್ತಮ ಗುಣಮಟ್ಟದ ಆಹಾರ ದೊರೆಯುವ ಫುಡ್ ಟ್ರಕ್ ಗಳ ಮುಂದೆ ನಿಂತು ಬಾಯಿ ಚಪ್ಪಾರಿಸುತ್ತಾರೆ. ಶಾಲಾ ಕಾಲೇಜು ಮತ್ತು ಹೆಚ್ಚು ಜನ ಸೇರುವ ಕಡೆ ಈ ಉದ್ಯಮವನ್ನು ಶುರು ಮಾಡಿದರೆ ಉತ್ತಮ ವ್ಯಾಪಾರ ಮಾಡಬಹುದು.

ದೊಡ್ಡ ದೊಡ್ಡ ಹೋಟೆಲ್ ಉದ್ಯಮವನ್ನು ನಡೆಸಲು ಆಸೆ ಪಡುವ ಸಾಮಾನ್ಯ ಜನರಿಗೆ ಕಡಿಮೆ ಬಂಡವಾಳದಿಂದ ಈ ಉದ್ಯಮವನ್ನು ಶುರು ಮಾಡಿ ತಮ್ಮ ಲಾಭ ನಷ್ಟಗಳನ್ನು ಲೆಕ್ಕ ಹಾಕಬಹುದು. ಯಾವ ಪ್ರದೇಶದಲ್ಲಿ ಬೇಕಾದರೂ ಚಲಾವಣೆ ಮಾಡಬಹುದಾದರಿಂದ  ನಷ್ಟದ ಪ್ರಮಾಣವನ್ನು ಕಡಿಮೆ ಮಾಡಬಹುದು.

ಸಂಜೆ ಸಮಯದಲ್ಲಿ ರಸ್ತೆ ಬದಿಯಲ್ಲಿ ಗೋಬಿ, ಎಗ್ ರೈಸ್, ನೂಡಲ್ಸ್, ಕಬಾಬ್, ಬಿರಿಯಾನಿ, ಇಡ್ಲಿ, ಪಾನಿಪುರಿ ಗಳನ್ನು ಕೈಗಾಡಿ ಮತ್ತು ಸಣ್ಣ ರಿಕ್ಷಗಳಲ್ಲಿ ಸಂಜೆ ಆರರಿಂದ 11 ಗಂಟೆ ತನಕ ಮಾರಾಟ ಮಾಡಿ ಯಾವುದೇ ಸರಕಾರಿ ಮತ್ತು ಐಟಿ ಉದ್ಯೋಗಿಗಳ ವೇತನಕ್ಕೆ ಸರಿಸಮಾನವಾಗಿ ದುಡಿಯಬಹುದು ಮತ್ತು ದುಡಿಯುತ್ತಿರುವವರನ್ನು ಈ ಸಮಾಜದಲ್ಲಿ ನಾವು ಗಮನಿಸಬಹುದು.

 

 

Leave a Comment