ಆಕಾಶಕ್ಕೆ ಏಣಿ ಹಾಕುತ್ತಿರುವ ಕರ್ನಾಟಕದ ಪ್ರಮುಖ ರಾಜಕೀಯ ಪಕ್ಷಗಳ ಪ್ರಣಾಳಿಕೆ!

ಕರ್ನಾಟಕ : ರಾಜ್ಯದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಪ್ರಣಾಳಿಕೆ ಬಿಡುಗಡೆಯಾಗಿದೆ. ಚುನಾವಣೆ ಎಂಬುದು ಸಂವಿಧಾನ ನಾಗರಿಕರಿಗೆ ಕೊಟ್ಟಿರುವ ವಿಶೇಷ ಹಕ್ಕು ಇದನ್ನು ಸವಿಂದಾನದ ಹಬ್ಬ ಎಂದರೆ ತಪ್ಪಾಗಲಾರದು. ಮತದಾರರು ಮನಸ್ಸು ಮಾಡಿದರೆ ಯಾವ ಪಕ್ಷವನ್ನು ಅಧಿಕಾರಕ್ಕೆ ತರಬಹುದು ಮತ್ತು ಅಧಿಕಾರದಿಂದ ತೆಗೆಯಬಹುದು ಎಂಬುದನ್ನು ನಿರ್ಣಯಿಸಲು ಇರುವ ಒಂದು ಪ್ರಮುಖ ದಿನವಾಗಿದೆ ಮತದಾನ. ಆದರೆ ಈಗಿನ ಚುನಾವಣಾ ಪ್ರಕ್ರಿಯೆಯನ್ನು ಗಮನಿಸಿದರೆ ರಾಜಕೀಯ ಪಕ್ಷಗಳು ಮತದಾರರ ಬಲಹೀನತೆಯನ್ನು ಅರಿತು ಕುಕ್ಕರ್, ಟಿವಿ, ಸೀರೆ, ನೋಟಿನ ಆಮಿಷ ಒಡ್ಡಿ ಮತದಾನದ ಮೂಲ ಆಶಯವನ್ನೇ ಬಡಮೇಲು ಮಾಡುವಂತಿದೆ.

ಪ್ರಮುಖ ರಾಜಕೀಯ ಪಕ್ಷ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಗ್ಯಾರೆಂಟಿಗಳ ಮಹಾಪೂರ.

ನಮ್ಮ ದೇಶದ ಅತಿ ಹಳೆಯ ಸಕ್ರಿಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಹೇಗಾದರೂ ಮಾಡಿ ಅಧಿಕಾರಕ್ಕೆ ಮರಳಬೇಕೆಂಬ ಆಲೋಚನೆಯಲ್ಲಿ ಮತದಾರರಿಗೆ ಗ್ಯಾರಂಟಿಗಳ ಮಹಾಪೂರವನ್ನೇ ನೀಡಿದೆ. ಈ ಹಿಂದೆ ಹಿಮಾಚಲ ಪ್ರದೇಶದಲ್ಲಿ ಇವರು ಇದೇ ರೀತಿ ಭರವಸೆಗಳನ್ನು ನೀಡಿ ಈಡೇರಿಸದಿರುವುದನ್ನು ನಾವು ನೋಡಿದ್ದೇವೆ.

ಕಾಂಗ್ರೆಸ್ ಪಕ್ಷವು ಘೋಷಿಸಿರುವ ಯೋಜನೆಗಳಲ್ಲಿ ಎಷ್ಟು ಭರವಸೆಗಳನ್ನು ಈಡೇರಿಸುತ್ತದೆ ಮತ್ತು ಈಡೇರಿಸಲು ಸಂಪನ್ಮೂಲವನ್ನು ಹೇಗೆ ಹೊಂದಿಸಿಕೊಳ್ಳುತ್ತಾರೆ ಎಂಬುದಕ್ಕೆ ಇವರು ತಮ್ಮ ಪ್ರಣಾಳಿಕೆಯಲ್ಲಿ ಉತ್ತರವನ್ನು ನೀಡಿಲ್ಲ.

ಕಾಂಗ್ರೆಸ್ ಪಕ್ಷ ಘೋಷಿಸಿದ ಮೊದಲ ಗ್ಯಾರಂಟಿ ಏನೆಂದರೆ ಪ್ರತಿ ಮನೆಗೆ ಇನ್ನೂರು ಯೂನಿಟ್ ವಿದ್ಯುತ್ ಗೃಹಜೋತಿ  ಯೋಜನೆ ಅಡಿಯಲ್ಲಿ ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ. ಪ್ರತಿ ತಿಂಗಳು ಬಿಪಿಎಲ್ ಕಾರ್ಡ್ದಾರರಿಗೆ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ 10 ಕೆಜಿ ಉಚಿತ ಅಕ್ಕಿಯನ್ನು ವಿಸ್ತರಿಸಲಾಗುವುದು ಎಂದು ಕಾಂಗ್ರೆಸ್ ಮೂರನೇ ಗ್ಯಾರಂಟಿಯಲ್ಲಿ ಘೋಷಿಸಿದೆ.

ಕಾಂಗ್ರೆಸ್ ತನ್ನ ಗ್ಯಾರಂಟಿ ನಂಬರ್ ನಾಲ್ಕರಲ್ಲಿ ಯುವ ನಿಧಿ ಯೋಜನೆಯಡಿಯಲ್ಲಿ ಕರ್ನಾಟಕದಲ್ಲಿ ಪದವಿ ಮಾಡಿ ನಿರುದ್ಯೋಗದಲ್ಲಿರುವ ಜನರಿಗೆ 3000 ನೀಡುವುದಾಗಿ ಮತ್ತು ಡಿಪ್ಲೋಮೋ ಮಾಡಿದವರಿಗೆ ಒಂದುವರೆ ಸಾವಿರ ನೀಡುವುದಾಗಿ ಕಾಂಗ್ರೇಸ್ ತನ್ನ ಗ್ಯಾರಂಟಿ ಯಲ್ಲಿ ತಿಳಿಸಿದೆ. ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಮನೆಯ ಯಜಮಾನಿಗೆ ತಿಂಗಳಿಗೆ 2000 ಸಹಾಯಧನವನ್ನು ನೀಡುವುದಾಗಿ ಮತ್ತು ಶಕ್ತಿ ಯೋಜನೆಯ ಅಡಿಯಲ್ಲಿ ಎಲ್ಲಾ ಮಹಿಳೆಯರಿಗೆ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಅವಕಾಶವನ್ನು ನೀಡುವುದಾಗಿ ಘೋಷಿಸಿದ್ದಾರೆ.

ಉಳಿದಂತೆ ಆಶಾ ಕಾರ್ಯಕರ್ತೆಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಪೊಲೀಸರಿಗೆ ತಿಂಗಳಿಗೆ 5000 ಹೆಚ್ಚುವರಿಯಾಗಿ ನೀಡುವುದಾಗಿ ಘೋಷಿಸಿದ್ದಾರೆ.

ಧರ್ಮ ಮತ್ತು ಜಾತಿಯ ಹೆಸರಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಕಾಂಗ್ರೆಸ್ ಭದ್ರ ಮತ್ತು ಸಂವಿಧಾನವನ್ನು ಉಲ್ಲಂಘಿಸುವ ಬಜರಂಗದಳ ಮತ್ತು ಎಸ್ಡಿಪಿಐ ಅಂತಹ ಸಂಘಟನೆಗಳನ್ನು ನಿಷೇಧ ಮಾಡುವುದಾಗಿ ಘೋಷಿಸಿದ್ದಾರೆ.

ಬಜರಂಗದಳ ನಿಷೇಧ ಮಾಡುತ್ತೇವೆ ಎಂಬ ಕಾಂಗ್ರೆಸ್ ಪ್ರಣಾಳಿಕೆ ಈಗ ಬಿಜೆಪಿಯವರ ಮೂಲ ಅಸ್ತ್ರವಾಗಿ ರೂಪುಗೊಂಡಿದೆ ಮತ್ತು ಈ ನಿರ್ಧಾರ ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ಪಮಟ್ಟಿನ ಹಾನಿಯನ್ನುಂಟು ಮಾಡಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿಯನ್ನು ನೋಡಿದರೆ ನಿರುದ್ಯೋಗಿ ಮದುವೆಯಾದ ಯುವಕ ತಿಂಗಳಿಗೆ 10 ಕೆಜಿ ಅಕ್ಕಿ, 3000 ಯುವನಿಧಿ ಮತ್ತು ಹೆಂಡತಿಯ 2000 ಗಹಲಕ್ಷ್ಮಿ ಸಹಾಯಧನ, 200 ಯೂನಿಟ್ ಉಚಿತ ವಿದ್ಯುತ್ ಮತ್ತು ಹೆಂಡತಿಗೆ ಉಚಿತ ಬಸ್ ಪ್ರಯಾಣ ಸಿಕ್ಕರೆ ಕೆಲಸಕ್ಕೆ ಯಾತಕ್ಕಾಗಿ ಹೋಗಬೇಕೆಂಬ ಯೋಚನೆಯನ್ನು ಉಂಟು ಮಾಡಿದರೆ ಸರಕಾರಕ್ಕೆ ಟ್ಯಾಕ್ಸ್ ಕಟ್ಟುವವರಾರು ಎಂಬುವುದು ಬುದ್ಧಿವಂತರ ವಾದವಾಗಿದೆ.

ಜಾತ್ಯಾತೀತ ಜನತಾದಳದ ಜನತಾ ಪ್ರಣಾಳಿಕೆ.

ಕರ್ನಾಟಕದಲ್ಲಿ ತಮ್ಮ ಹಳೆ ವರ್ಚಸ್ಸು ಮತ್ತು ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಜೆಡಿಎಸ್ ಪಕ್ಷವು ತನ್ನ ಜನತಾ ಪ್ರಣಾಳಿಕೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕರಿದಿಗೆ ಸಾಲ ಮಾಡದಂತೆ ರೈತರ ಪ್ರತಿ ಎಕರೆಗೆ 10,000 ಸಹಾಯಧನ ನೀಡುವುದು, ಯುವ ರೈತರನ್ನು ಮದುವೆಯಾದ ಯುವತಿಯರಿಗೆ 2 ಲಕ್ಷ ಪ್ರೋತ್ಸಾಹ ಧನ ನೀಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಘೋಷಿಸಿದೆ.

ರಾಜ್ಯದಲ್ಲಿರುವ ಪ್ರತಿ ಆಟೋ ಚಾಲಕನಿಗೆ ಪ್ರತಿ ತಿಂಗಳು 2000 ಪ್ರೋತ್ಸಾಹಧನ, ಬಡತನ ರೇಖೆಗಿಂತ ಕೆಳಗಿರುವ ಹಿರಿಯರಿಗೆ 1200 ರಿಂದ ಐದು ಸಾವಿರದವರೆಗೆ ಮಾಶಾಸನ ಹೆಚ್ಚಳ ಮಾಡುವುದು, ಗರ್ಭಿಣಿ ತಾಯಂದಿರಿಗೆ  ಮಾತೃಶ್ರೀ ಯೋಜನೆಯ ಅಡಿಯಲ್ಲಿ ಆರು ತಿಂಗಳ ಕಾಲ 6,000 ಬತ್ಯೆ, ಶ್ರೀ ಶಕ್ತಿ ಸ್ವಸಹಾಯ ಸಂಘಗಳ ಸಾಲ ಮನ್ನಾ, ವಿದವ ವೇತನ 900 ರಿಂದ 2500 ಸಾವಿರದವರೆಗೆ ಹೆಚ್ಚಳ, ವರ್ಷಕ್ಕೆ 5 ಗ್ಯಾಸ್ ಸಿಲಿಂಡರ್ ಉಚಿತ ಯೋಜನೆಗಳನ್ನು ತಮ್ಮ ಜನತಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಾರೆ.

ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 6.8 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ಮತ್ತು ಸರ್ಕಾರಿ ಮತ್ತು ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ, ಆರ್ಥಿಕವಾಗಿ ಹಿಂದುಳಿದ, 18 ವರ್ಷ ತುಂಬಿರುವ ಯುವತಿಯರಿಗೆ ವಿದ್ಯುತ್ ಚಾಲಿತ ಮೊಪೆಡ್ ನೀಡುವುದಾಗಿ ಘೋಷಿಸಿದ್ದಾರೆ.

ಭಾರತೀಯ ಜನತಾ ಪಾರ್ಟಿಯ ಭರವಸೆಗಳು.

ಬಿಪಿಎಲ್ ಕುಟುಂಬಗಳಿಗೆ ಪ್ರತಿವರ್ಷ ಯುಗಾದಿ, ಗಣೇಶ ಚತುರ್ಥಿ, ಮತ್ತು ದೀಪಾವಳಿಗೆ ತಲಾ ಒಂದರಂತೆ ಒಟ್ಟು ಮೂರೂ ಉಚಿತ ಅಡುಗೆ ಅನಿಲದ ಸಿಲಿಂಡರ್, ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯಕರ ಆಹಾರವನ್ನು ಒದಗಿಸಲು ಪ್ರತಿ ಮಹಾನಗರ ಪಾಲಿಕೆ ವಾರ್ಡ್ಗಳಲ್ಲಿ ಅಟಲ್ ಆಹಾರ ಕೇಂದ್ರ ಸ್ಥಾಪನೆ, ಬಿಪಿಎಲ್ ಕುಟುಂಬಕ್ಕೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು ಮತ್ತು 5 ಕೆಜಿ ಸಿರಿಧಾನ್ಯವನ್ನು ಪ್ರತಿ ವ್ಯಕ್ತಿಗೆ ನೀಡುವುದಾಗಿ ಘೋಷಿಸಿದೆ.

ಘೋಷಣೆ ಯೋಜನೆ ಅಡಿಯಲ್ಲಿ ಬಿಜೆಪಿ ನೀಡಿರುವ 5 ಕೆಜಿ ಸಿರಿಧಾನ್ಯ ಯೋಜನೆಯನ್ನು ನೋಡುವುದಾದರೆ ಕರ್ನಾಟಕದಲ್ಲಿ ಒಂದು ಕೋಟಿ 31 ಲಕ್ಷ ಬಿಪಿಎಲ್ ಕಾರ್ಡ್ ಬಳಕೆದಾರರು 2000 ರ ವರದಿ ಪ್ರಕಾರ ಇದ್ದಾರೆ. ಪ್ರತಿ ಮನೆಯಲ್ಲಿ ಮೂರು ಜನ ಎಂದು ಲೆಕ್ಕ ಹಾಕಿದರೆ ಮೂರು ಕೋಟಿ ತೊಂಬತ್ತು ಲಕ್ಷ ಜನರಿಗೆ 19 ಕೋಟಿ ಕೆಜಿಯಷ್ಟು ಸಿರಿಧಾನ್ಯ ಬೇಕಾಗುತ್ತದೆ, ಆದರೆ ಇಷ್ಟೊಂದು ಪ್ರಮಾಣದ ಸಿರಿಧಾನ್ಯದ ಸಂಪನ್ಮೂಲ ಎಲ್ಲಿದೆ ಎಂಬ ಪ್ರಶ್ನೆಗೆ ಸ್ಪಷ್ಟನೆ ಇಲ್ಲವಾಗಿದೆ.

ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಟಿಸುತ್ತಿರುವ ಬಿಜೆಪಿ ಪಕ್ಷವು ಕರ್ನಾಟಕದಲ್ಲಿ ತನ್ನ ಪ್ರಣಾಳಿಕೆಗಿಂತ ಹೆಚ್ಚಾಗಿ ನರೇಂದ್ರ ಮೋದಿ, ಯೋಗಿ ಆದಿತ್ಯಾನಂದ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬಿಡುವಿಲ್ಲದೆ ಪ್ರಚಾರ ನಡೆಸಿ ಮತದಾರರ ಮತ ಸೆಳೆಯಲು ಹರಸಾಹಸ ಮಾಡುತ್ತಿರುವುದು ವಿಪರ್ಯಾಸವಾಗಿದೆ.

ಉತ್ತಮ ಮುಂದಿನ ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಮತದಾರ ಮಾಡಬೇಕಿರುವುದು ಇಷ್ಟೆ

ಚುನಾವಣೆ ಬಂದಾಗ ನಮ್ಮ ರಾಜ್ಯದ ಪ್ರಮುಖ ರಾಷ್ಟ್ರೀಯ ಪಕ್ಷಗಳು ಎಲ್ಲಾ ಫ್ರೀ ಫ್ರೀ ಎಂದು ಚುನಾವಣೆಯ ಮುಂದೆ ಬೊಬ್ಬೆ ಹೊಡೆದು ಚುನಾವಣೆ ಮುಗಿದ ನಂತರ ಮತದಾರರನ್ನು ನಿರ್ಲಕ್ಷಿಸುವುದು ಮಾಮೂಲಿಯಾಗಿ ಬಿಟ್ಟಿದೆ. ರಾಜಕೀಯ ಪಕ್ಷಗಳು ಆಕಾಶಕ್ಕೆ ಏಣಿ ಹಾಕಿ ಕೊಡುತ್ತೇವೆ ಎಂದಾಗ, ಏಣಿ ಹಾಕಿ ಕೊಡಿ ಎಂದು ಕೇಳುವ ಮತದಾರರ ಮನಸ್ತಿತಿ ಬದಲಾದರೆ ಮಾತ್ರ ನಮ್ಮ ರಾಜ್ಯ ಮತ್ತು ದೇಶ ಅಭಿವೃದ್ಧಿಯಾಗುತ್ತದೆ. ಮತದಾರರು ಬುದ್ದಿವಂತಿಕೆಯಿಂದ ತಮ್ಮ ಕ್ಷೇತ್ರದ ಅಭಿವೃದ್ಧಿ ಮಾಡುವ ಉತ್ತಮ ವ್ಯಕ್ತಿಯನ್ನು ಆರಿಸಿ ವಿಧಾನಸಭೆ ಮತ್ತು ಲೋಕಸಭೆಗೆ ಆರಿಸಿ ಕಳುಹಿಸಿಕೊಟ್ಟರೆ ಆ ಕ್ಷೇತ್ರ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಸಂಶಯವಿರುವುದಿಲ್ಲ.

Leave a Comment